ಪಿಂಗಳಿಸೂರನ
16 ನೆಯ ಶತಮಾನದಲ್ಲಿದ್ದ ತೆಲುಗು ಮಹಾಕವಿ. ಶ್ರೀಕೃಷ್ಣದೇವರಾಯನ ಆಸ್ಥಾನದಲ್ಲಿದ್ದ ಅಷ್ಟದಿಗ್ಗಜಗಳೆಂಬ ಮಹಾಕವಿಗಳಲ್ಲಿ ಒಬ್ಬನೆಂದು ಹೇಳುವುದು ಸಂಪ್ರದಾಯ. ಆದರೆ 16 ನೆಯ ಶತಮಾನದ ಆದಿಭಾಗದಲ್ಲಿ ವಿಜಯನಗರವನ್ನು ಆಳುತ್ತಿದ್ದ ಶ್ರೀಕೃಷ್ಣದೇವರಾಯನ ಕಾಲಕ್ಕೆ ಪಿಂಗಳಿಸೂರನ ಬಹಳ ಚಿಕ್ಕವನಾಗಿದ್ದಿರಬಹುದೆಂದು ವಿಮರ್ಶಕರ ಅಭಿಪ್ರಾಯ. 
ಪಿಂಗಳಿಸೂರನ ತೆಲುಗಿನ ಅತ್ಯಂತ ಪ್ರತಿಭಾವಂತ ಕವಿಗಳಲ್ಲೊಬ್ಬ. ಗಿರಿಜಾ ಕಲ್ಯಾಣ, ಗರುಡ ಪುರಾಣ, ರಾಘವ ಪಾಂಡವೀಯ, ಕಳಾಪೂರ್ಣೋದಯ ಹಾಗೂ ಪ್ರಭಾವತಿ ಪ್ರದ್ಯುಮ್ನ ಎಂಬವು ಈತನ ಕೃತಿಗಳು. ಮೊದಲಿನ ಎರಡು ಕೃತಿಗಳು ಈಗ ಲಭಿಸುತ್ತಿಲ್ಲ. ಗಿರಿಜಾಕಲ್ಯಾಣವನ್ನು ಬಹುಶಃ ತಾರುಣ್ಯದಲ್ಲಿ ರಚಿಸಿರಬೇಕು. ಅದರ ಒಂದು ಪದ್ಯವನ್ನು ಮಾತ್ರ ಕಸ್ತೂರಿರಂಗಕವಿ ರಂಗರಾಟ್ಛಂದವೆಂಬ ಛಂದೋಗ್ರಂಥದಲ್ಲಿ ಉದಾಹರಿಸಿದ್ದಾನೆ. ಅಲಭ್ಯ ಗರುಡಪುರಾಣ ಒಂದು ಪವಿತ್ರ ಕಾವ್ಯ. ಇದರಲ್ಲಿ ಪಿತೃದೇವತೆಗಳ ಪುಣ್ಯಪಾಪ ಗತಿಗಳನ್ನು ಕುರಿತು, ಅಪರಕರ್ಮಾದಿವಿಧಿಗಳನ್ನು ಕುರಿತು ವಿಶೇಷವಾಗಿ ವರ್ಣಿಸಲಾಗಿದೆ. ಇದು ಸಂಸ್ಕøತ ಗರುಡಪುರಾಣದ ಅನುವಾದ. 

ಲಭ್ಯ ಕೃತಿಗಳಲ್ಲಿ ಮೊದಲನೆಯದಾದ ರಾಘವಪಾಂಡವೀಯವೆಂಬುದು ದ್ವ್ಯರ್ಥಿಕಾವ್ಯ. ಶ್ಲೇಷೆಯ ಚಮತ್ಕಾರಗಳಲ್ಲಿ ಆಸಕ್ತಿ ಇರುವ ಆಕುವೀಟಿಪೆದವೆಂಕಟಾದ್ರಿ ರಾಜನಿಗೆ ಈ ಕಾವ್ಯವನ್ನು ಸಮರ್ಪಿಸಲಾಗಿದೆ. ವೇಮುಲವಾಡ ಭೀಮಕವಿ ಇದೇ ಹೆಸರಿನ ದ್ವ್ಯರ್ಥಿಕಾವ್ಯವನ್ನು ಬರೆದಿದ್ದನಂತೆ. ಅದು ಸೂರನನ ಕಾಲದಲ್ಲಿ ಅಲಭ್ಯವಾಗಿತ್ತು. ಪಿಂಗಳಿಸೂರನ ಅಂತಹದೊಂದು ಕಾವ್ಯರಚನೆಯನ್ನು ಕೈಗೊಂಡು ಒಂದು ನೂತನ ಕಾವ್ಯಪ್ರಕಾರಕ್ಕೆ ಮಾರ್ಗದರ್ಶಕನಾಗಿದ್ದಾನೆ. ಎರಡರ್ಥಗಳು ಬರುವ ಒಂದು ಪದ್ಯವನ್ನು ಬರೆಯುವುದೇ ಕಷ್ಟ. ಅಂತಹದರಲ್ಲಿ ಎರಡರ್ಥ ಬರುವ ಒಂದು ಕಾವ್ಯವನ್ನೇ ಬರೆದು ಸೂರನ ಶ್ಲೇಷೆಯಲ್ಲಿ ತನಗಿರುವ ಪ್ರಭುತ್ವವನ್ನು ತೋರಿಸಿದ್ದಾನೆ. ಈ ಕಾವ್ಯದಲ್ಲಿ ಪ್ರತಿಪದ್ಯಕ್ಕೂ ರಾಮಾಯಣ ಹಾಗೂ ಭಾರತಗಳ ಪರವಾಗಿ ಅರ್ಥವನ್ನು ಹೇಳಬಹುದು. ತೆಲುಗಿನಲ್ಲಿ ಬಂದ ಅನೇಕಾರ್ಥಕ ಕಾವ್ಯಗಳಲ್ಲಿ ಸೂರನನ ಕಾವ್ಯ ವಿಶಿಷ್ಟವಾದುದ್ದೆಂದು ಹೇಳಬಹುದು. ನಾಲ್ಕು ಆಶ್ವಾಸಗಳ ಈ ಚಂಪೂ ಕಾವ್ಯದಲ್ಲಿ 650 ಪದ್ಯಗಳಿವೆ.

ಕಳಾಪೂರ್ಣೋದಯ ತೆಲುಗು ಸಾಹಿತ್ಯದಲ್ಲಿ ಒಂದು ವೈಶಿಷ್ಟ್ಯಪೂರ್ಣಕಾವ್ಯ. ತೆಲುಗು ಸಾಹಿತ್ಯದ ಬಹುಪಾಲು ಕಾವ್ಯಗಳಿಗೆ ಸಂಸ್ಕøತ ಪುರಾಣೇತಿಹಾಸಗಳೇ ವಸ್ತುಗಳನ್ನು ಒದಗಿಸಿವೆ. ಆದರೆ ಕಳಾಪೂರ್ಣೋದಯದ ಕಥೆಯನ್ನು ಸೂರನನೇ ಕಲ್ಪಿಸಿದಂಥದ್ದು. ಇದೊಂದು ಪದ್ಯರೂಪದ ಕಾದಂಬರಿ. ಬಾಣನ ಕಾದಂಬರಿಯಲ್ಲಿರುವಂತೆಯೇ ಚಿತ್ರವಿಚಿತ್ರವಾದ ಸನ್ನಿವೇಶಗಳನ್ನೊಳಗೊಂಡ ಕಥನತಂತ್ರ ಇದರಲ್ಲಿದೆ. ಕಳಾಪೂರ್ಣ ಕಾವ್ಯದ ನಾಯಕ. ಕಲಾಭಾಷಿ. ಮಧುರಲಾಲಸ, ರಂಭನಲಕೂಬರರು ಹಾಗೂ ಸರಸ್ವತಿ ಚತುರ್ಮುಖರ ವೃತ್ತಾಂತಗಳು ಸೂರನನ ಪಾತ್ರ ನಿರ್ಮಾಣ ಚಾತುರ್ಯಕ್ಕೆ ಉದಾಹರಣೆಗಳಾಗಿ ನಿಂತಿವೆ. ಇದರಲ್ಲಿ ಕಥೆಗಳನ್ನು ಕಾಲಾನುಕ್ರಮವಾಗಿ ನಿರೂಪಿಸದೆ ಹಿಂದೆ ನಡೆದ ಘಟನೆಗಳನ್ನು ಅನಂತರದಲ್ಲಿ ಹೇಳುವ ಆಧುನಿಕ ಕಾದಂಬರಿಯ ರಚನಾ ತಂತ್ರವನ್ನು ಅನುಸರಿಸಲಾಗಿದೆ.

ಪ್ರಭಾವತಿ ಪ್ರದ್ಯುಮ್ನ ಎಂಬುದು ಕೆಲವರ ಅಭಿಪ್ರಾಯದಲ್ಲಿ ಸೂರನನ ಕಾವ್ಯಗಳಲ್ಲಿ ಅತ್ಯತ್ತಮವಾದುದು. ಇದನ್ನು ಒಂದು ದೃಶ್ಯಕಾವ್ಯದಂತೆ ರಚಿಸಲಾಗಿದೆ. ಈ ಚಂಪೂ ಕಾವ್ಯದ ಮೂಲಕಥೆಯನ್ನು ಸಂಸ್ಕøತದಿಂದ ತೆಗೆದುಕೊಂಡಿದ್ದರೂ ಒಂದು ಸ್ವತಂತ್ರ ಕೃತಿಯಂತೆ ರಚಿಸಲಾಗಿದೆ. ಇಲ್ಲಿ ಮುಖ್ಯವಾಗಿ ಹೆಸರಿಸಬೇಕಾದ್ದು ಶುಚಿಮುಖಿಯ ಪಾತ್ರ. ಬ್ರಹ್ಮನ ರಥವನ್ನು ನಡೆಸುವ ಹಂಸರಾಜನ ಮಗುವದು. ವಾಣಿಯ ಬಳಿ ವಿಮಲ ವಿದ್ಯಾಶಿಕ್ಷಣವನ್ನು ಪಡೆದ ಚತುರೆ. ಈ ಕಾವ್ಯದ ಕಥಾತಂತ್ರವನ್ನು ನಡೆಸುವ ಕಾರ್ಯಸಂಧಾನತತ್ಪರಳಾಗಿ ಈಕೆ ತೋರುವ ಜಾಣ್ಮೆ ಮನಸ್ಸನ್ನು ಸೂರೆಗೊಳ್ಳುತ್ತದೆ.

ಅಲಂಕಾರ ಪ್ರಧಾನವೆಂಬ ಪ್ರಬಂಧವೆಂಬ ಕಾವ್ಯ ಪ್ರಕಾರ ಬೆಳೆದ ಶ್ರೀಕೃಷ್ಣದೇವರಾಯನ ಕಾಲದಲ್ಲಿ ರಚಿತವಾದ ಸೂರನನ ಕೃತಿಗಳು ಔಚಿತ್ಯ, ಶಬ್ಧಾರ್ಥಗಳಿಗೆ ಸಮಾನ ಪ್ರಾಧಾನ್ಯವಿರುವ ಉತ್ತಮ ಕಾವ್ಯಗಳಾಗಿ ವೈಶಿಷ್ಟ್ಯ ಪೂರ್ಣವಾಗಿ ಶೋಭಿಸುತ್ತಿವೆ.
(ಆರ್.ವಿ.ಎಸ್.ಎಸ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ